ಕರ್ನಾಟಕ ಕಾಂಗ್ರೆಸ್​ನಲ್ಲಿ ಡಿನ್ನರ್ ಮತ್ತು ಡಿಶುಂ ಡಿಶುಂ ಪಾಲಿಟಿಕ್ಸ್; ಹತಾಶೆಗೊಂಡ ಹಿರಿಯರು; ಕಿವಿ ಹಿಂಡುತ್ತಾರಾ ಸುರ್ಜೆವಾಲ

1 0
Read Time:4 Minute, 54 Second

Karnataka Congress Rift: ಕರ್ನಾಟಕ ಕಾಂಗ್ರೆಸ್​ನೊಳಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವೆ ಬಹಿರಂಗ ಕಚ್ಚಾಟ ಅತಿರೇಕಕ್ಕೆ ಹೋಗುತ್ತಿದೆ. ಇದು ಹಿರಿಯ ನಾಯಕರನ್ನು ಆತಂಕಗೊಳಿಸಿದೆ. ಪಕ್ಷ ಉಳಿಸಲು ವಿವಿಧ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್​ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಂದು ಭಾನುವಾರ ಸಂಜೆ ಶಾಸಕಾಂಗ ಸಭೆ ನಡೆಸುತ್ತಿದ್ದು ಅಲ್ಲಿ ಈ ವಿಚಾರಗಳ ಪ್ರಸ್ತಾಪವಾಗಬಹುದು.

ಬೆಂಗಳೂರು, ಜನವರಿ 12: ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಎಷ್ಟೇ ಒಗ್ಗಟ್ಟಿನ ಬಲ ಪ್ರದರ್ಶನ ತೋರಿದರೂ ಅದರ ಒಳಬೇಗುದಿ ಮತ್ತು ಆಂತರಿಕ ಕಚ್ಚಾಟ ಆಗಾಗ್ಗೆ ಬಹಿರಂಗಗೊಳ್ಳುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಸತೀಶ್ ಜಾರಕಿಹೊಳಿ ಮನೆಯಲ್ಲಿ ಕೆಲ ನಾಯಕರು ಸಿಎಂ ಜೊತೆ ಡಿನ್ನರ್​ನಲ್ಲಿ ಪಾಲ್ಗೊಂಡಿದ್ದು ಸಾಕಷ್ಟು ಹುಬ್ಬೇರಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣಗಳ ನಡುವಿನ ಕಚ್ಚಾಟವು ಜಾತಿ ಸ್ವರೂಪದಂತಹ ಅತಿರೇಕಕ್ಕೆ ಹೋಗಿದೆ. ಇದು ಈಗ ರಾಜ್ಯ ಕಾಂಗ್ರೆಸ್​ನ ಹಿರಿಯ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವುದರಿಂದ ಪ್ರತಿಪಕ್ಷಗಳಿಗೆ ತಾವೇ ಅಸ್ತ್ರ ಕಟ್ಟಂಗೆ ಆಗುತ್ತದೆ. ಹಿರಿಯ ನಾಯಕರೇ ಈ ರೀತಿ ಬಹಿರಂಗವಾಗಿ ಟೀಕೆಗಳನ್ನು ಮಾಡಿದರೆ ಪಕ್ಷಕ್ಕೆ ಹಾನಿಯಾಗುವುದು ನಿಶ್ಚಿತ. ಇದಕ್ಕೆ ಕಡಿವಾಣ ಹಾಕದಿದ್ದರೆ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಲಿದೆ ಎಂದು ಕೆಲ ಹಿರಿಯ ನಾಯಕರು ಬೇಸರ ಹೊರಹಾಕಿರುವುದು ತಿಳಿದುಬಂದಿದೆ.

ಮೊನ್ನೆ ಡಿಸಿಎಂ ಜೊತೆ ನಡೆದ ಸಭೆಯಲ್ಲಿ ಹಿರಿಯ ನಾಯಕರು ಈ ಆತಂಕ ತೋಡಿಕೊಂಡಿದ್ದರು. ಜನವರಿ 16, ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಈ ನಾಯಕರು ಇದೇ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಿವಿಹಿಂಡುತ್ತಾರಾ ಸುರ್ಜೆವಾಲ?

ಕರ್ನಾಟಕ ಕಾಂಗ್ರೆಸ್​ನ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಿನ್ನೆ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಳಗಾವಿಗೆ ಗಾಂಧಿ ಭೇಟಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಜನವರಿ 21ರಂದು ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ನಡೆಯಲಿದ್ದು, ಅದರ ಸಿದ್ಧತೆ ವಿಚಾರವಾಗಿ ಸುರ್ಜೆವಾಲ ಚರ್ಚಿಸಲಿದ್ದಾರೆ. ಇಂದು ಭಾನುವಾರ ಸಂಜೆ 6ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು ಸರ್ಜೆವಾಲ ಕೂಡ ಇರಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್​ನೊಳಗಿನ ಭಿನ್ನಮತದ ವಿಚಾರ ಚರ್ಚೆಗೆ ಬರಬಹುದು. ಡಿಸಿಎಂ ಅನುಪಸ್ಥಿತಿಯಲ್ಲಿ ಕೆಲ ಶಾಸಕರು ಔತಣಕೂಟದಲ್ಲಿ ಪಾಲ್ಗೊಂಡ ವಿಚಾರವೂ ಪ್ರಸ್ತಾಪವಾಗಬಹುದು. ಈ ಭಿನ್ನಮತ ಶಮನ ಮಾಡುವ ಗುರುತರ ಹೊಣೆ ಸುರ್ಜೆವಾಲಗೆ ಇದೆ.

ಸತೀಶ್ ಜಾರಿಕಿಹೊಳಿ ಮನೆಯಲ್ಲಿ ನಡೆದಿದ್ದ ಡಿನ್ನರ್ ಸಭೆ…

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿ ಇದ್ದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಈ ಔತಣಕೂಟದಲ್ಲಿದ್ದರು. ಸಿದ್ದರಾಮಯ್ಯ ಅವರ ಟೀಮ್​ನವರು ಎನ್ನಲಾದ ಹಲವು ಶಾಸಕರು ಮತ್ತು ನಾಯಕರು ಈ ಡಿನ್ನರ್​ನಲ್ಲಿ ಪಾಲ್ಗೊಂಡಿದ್ದರು. ಡಿಕೆ ಶಿವಕುಮಾರ್ ಅವರ ವರ್ತನೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ಈ ಸಭೆಯಲ್ಲಿ ಅಸಮಾಧಾನ ಹೊರಬಂದಿತು ಎನ್ನಲಾಗಿದೆ.

ಕಾಂಗ್ರೆಸ್‌ನ ಭವಿಷ್ಯ ಮತ್ತು ಪಕ್ಷದ ಒಗ್ಗಟ್ಟು

ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪ್ರಕರಣದ ನಿರ್ವಹಣೆ, ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಧ್ಯಪ್ರವೇಶ ಇವು ಪ್ರಮುಖವಾಗಿ ಈ ಸಭೆಯಲ್ಲಿ ಸದ್ದು ಮಾಡಿವೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸಿಎಂ ಕುರ್ಚಿ ಬಿಟ್ಟುಕೊಡಬಾರದು. ಒಂದು ವೇಳೆ ಒಪ್ಪಂದದ ಹೆಸರಿನಲ್ಲಿ ಸಿಎಂ ಸ್ಥಾನ ತ್ಯಜಿಸಿದರೆ, ಶಾಸಕಾಂಗ ಸಭೆಯಲ್ಲೇ ನೂತನ ಸಿಎಂ ಆಯ್ಕೆ ಆಗುವಂತಾಗಲಿ ಎಂದು ಈ ಸಿಎಂ ಆಪ್ತರು ಈ ಸಭೆಯಲ್ಲಿ ಸಿದ್ದರಾಮಯ್ಯರನ್ನು ಒತ್ತಾಯಿಸಿದರು ಎನ್ನುವ ಮಾಹಿತಿ ಮಧ್ಯಮಗಳಿಗೆ ಸಿಕ್ಕಿದೆ.

About Post Author

Karna News

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Comment